ಬುಲ್ಗಾನಿನ್, ನಿಕಲಾಯ್ ಅಲೆಕ್ಸಾಂದ್ರೊವಿಚ್
1895-1975. ಸೋವಿಯತ್ ಸಮಾಜವಾದಿ ಗಣರಾಜ್ಯದ ಪ್ರಸಿದ್ಧ ರಾಜಕಾರಣಿ, ಮುತ್ಸದ್ದಿ ಮತ್ತು ಪ್ರಧಾನಿ. ನೀಷ್ನಿ ನವ್‍ಗೋರದ್ (ಇಂದಿನ ಗಾರ್ಕಿ) ಎಂಬಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ 1895 ಜೂನ್ 11ರಂದು ಜನನ. ಉತ್ತಮ ಶಿಕ್ಷಣ ಪಡೆದ ಬುಲ್ಗಾನಿನ್ 1917ರ ಕ್ರ್ರಾಂತಿಗೆ ಮುನ್ನ ಕಮ್ಯೂನಿಸ್ಟ್ ಪಕ್ಷ ಸೇರಿದ. 1918ರಲ್ಲಿ ಪೊಲೀಸ್ ಗುಪ್ತದಳದ ಅಧಿಕಾರಿಯಾದ, 1922ರ ನಂತರ 9 ವರ್ಷ ಆರ್ಥಿಕ ವಿಧಾಯಕ ಕಾರ್ಯದಲ್ಲಿ ನಿಯುಕ್ತನಾದ. 1931ರಲ್ಲಿ ಮಾಸ್ಕೋ ಪಕ್ಷ ಸಮಿತಿಯ ಮುಖ್ಯಸ್ಥನಾದ. 1937ರಲ್ಲಿ ಸೋವಿಯತ್ ಒಕ್ಕೂಟ ಸಮಾಜವಾದಿ ಗಣರಾಜ್ಯದ (ಎಸ್.ಎಫ್.ಎಸ್.ಆರ್.) ಪ್ರಮುಖನಾದ. ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ರಷ್ಯವನ್ನು ಜರ್ಮನಿ ಆಕ್ರಮಿಸಿದಾಗ (1941) ಮಧ್ಯ ಮುಂಚೂಣಿಯ ರಾಜಕೀಯ ಕಮಿಷನರ್ ಆಗಿ ನೇಮಕಗೊಂಡ. ಸೇನಾ ಮುಖ್ಯಾಧಿಕಾರಿ ಸ್ಥಾನದಲ್ಲಿದ್ದ ಕಾರಣವಾಗಿ 1944ರಲ್ಲಿ ಸ್ಟಾಲಿನ್ನನ ಯುದ್ಧ ಮಂತ್ರಿ ಮಂಡಲದಲ್ಲಿ ಮಾರ್ಷಲ್ ವೊರೊಷಿಲೊವ್ ತೆರನಾದ ಸ್ಥಾನಕ್ಕೆ ಬಂದ. ಬಳಿಕ ಅದೇ ವರ್ಷ ರಕ್ಷಣಾಖಾತೆಯ ಉಪಮುಖ್ಯಮಂತ್ರಿಯಾದ. 1947ರಲ್ಲಿ ಮಾರ್ಷಲ್ ಆಗಿ ಸ್ಟಾಲಿನ್ನನ ಮಂತ್ರಿಮಂಡಲವನ್ನು ಕೈಗೆ ತೆಗೆದುಕೊಂಡ. 1949 ರಿಂದ ಯಾವ ಖಾತೆಯನ್ನು ವಹಿಸಿಕೊಳ್ಳದೆ ಇದ್ದರೂ ಕಮ್ಯೂನಿಸ್ಟ್ ಪಕ್ಷದ ಪೂರ್ಣಕಾಲ ಸದಸ್ಯನಾಗಿ ನೇಮಕಗೊಂಡು ಶಸ್ತ್ರಸಜ್ಜಿತ ಸೇನೆಯ ಸಮಸ್ತ ಪಡೆಗಳ ಮೇಲ್ವಿಚಾರಣಾ ಅಧಿಕಾರ ಪಡೆದ. 1953ರಲ್ಲಿ ಸ್ಟಾಲಿನ್ ಮರಣ ಹೊಂದಿದ್ದರಿಂದ ಮತ್ತೆ ರಕ್ಷಣಾ ಖಾತೆಯ ಮಂತ್ರಿಯಾದ. ಪಕ್ಷದ ಆಪ್ತ ಮಂತ್ರಾಲೋಚನ ಸಮಿತಿಯ (ಪ್ರಿಸಿಡಿಯಮ್) ಸದಸ್ಯನಾಗಿ ಉಪಪ್ರಧಾನಿಗಳಲ್ಲೊಬ್ಬನಾಗಿ ಕೆಲಸಮಾಡಿದ. 1955ರಲ್ಲಿ ಪ್ರಧಾನಿ ಜಿ.ಎಂ. ಮಾಲೆಂಕೊವ್ ಪದಚ್ಯುತನಾದ ಮೇಲೆ ಆ ಸ್ಥಾನಕ್ಕೆ ಬುಲ್ಲಾನಿನ್ ಚುನಾಯಿತನಾಗಿ 1958ರಲ್ಲಿ ನಿಕಿಟಾ ಕ್ರುಶ್ಚೇವ್ ಈತನಿಂದ ಅಧಿಕಾರ ಸ್ವೀಕರಿಸುವ ತನಕ ಪ್ರಧಾನಿಯಾಗಿ ಮುಂದುವರಿದ. ಭಾರತವೂ (1955) ಸೇರಿದಂತೆ ಅನೇಕ ವಿದೇಶಗಳಿಗೆ ಕ್ರುಶ್ಚೇವ್ ಜೊತೆಯಲ್ಲಿ ಭೇಟಿನೀಡಿದ. ಭಾರತ-ರಷ್ಯ ಸಂಬಂಧ ಭದ್ರಗೊಳಿಸಿದ.  		
	(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ